ಕೂಗುಸಿರು

	ಉಸಿರಾಡುವಾಗ ಶಬ್ದ ಬರುವಂಥ ಹದಗೆಟ್ಟ ಶ್ವಾಸಕ್ರಮ. ಮಕ್ಕಳಲ್ಲಿ ಸಾಮಾನ್ಯವಾಗಿ ಶೀತಸಂಬಂಧವಾಗಿ ಬರುವ ಗಂಟಲು ರೋಗದಲ್ಲಿ ಕೇಳಿಬರುವ ಶಬ್ದಸಹಿತವಾದ ಉಸಿರಾಟ, ಕೆಮ್ಮು ಉಬ್ಬಸ ರೋಗಿಗಳಲ್ಲಿ ಕೇಳಿ ಬರುವ ಗೊರೋ ಗೊರೋ ಎಂದು ಶಬ್ದ ಮಾಡಿಕೊಂಡು ಎಳೆದುಕೊಳ್ಳುವ ಉಸಿರು ಇವೂ ಇನ್ನು ಬೇರೆ ಕೆಲವು ಕಾಯಿಲೆಗಳಲ್ಲಿ ಕೇಳಿಬರುವ ಕಷ್ಟವಾದ ಶ್ವಾಸಕ್ರಮದಿಂದ ಉಂಟಾಗುವ ಗೊರಗೊರ ಶಬ್ದ, ಉಸಿರೆಳೆದುಕೊಂಡಾಗ ಶಿಳ್ಳು ಹೊಡೆದಂತೆ ಶಬ್ದವಾಗುವುದು ಇವೆಲ್ಲವನ್ನೂ ಕೂಗುಸಿರು ಎನ್ನುವ ಅಸ್ವಸ್ಥ ಸ್ಥಿತಿಯ ವ್ಯಾಪ್ತಿಗೆ ಸೇರಿಸಬಹುದು. ಆರೋಗ್ಯಸ್ಥಿತಿಯಲ್ಲೂ ಶಬ್ದದಿಂದೊಡಗೂಡಿದ ಶೀನು, ಬಿಕ್ಕಳಿಕೆ, ಗೊರಕೆ ಮುಂತಾದ ಶ್ವಾಸಕ್ರಮಗಳನ್ನು ಸಹ ಕೂಗುಸಿರುಗಳೆಂದು ಪರಿಗಣಿಸಬಹುದು. ಈ ಬೇನೆಗಳಿಗೆಲ್ಲ ಬೇರೆ ಬೇರೆ ರೀತಿಯ ನಿರ್ದಿಷ್ಟ ಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ.

	ಕೂಗುಸಿರಿನ ರೋಗಲಕ್ಷಣಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು: 1 ಸಾಮಾನ್ಯವಾಗಿ ಸುಮಾರು 6 ತಿಂಗಳಿನಿಂದ 2 ವರ್ಷ ವಯಸ್ಸಿನೊಳಗೆ ಇರುವ ಮಕ್ಕಳಲ್ಲಿ ತಲೆದೋರುವ ಕೂಗುಸಿರು. 2 ಮಕ್ಕಳಲ್ಲಿ ಕೇಳುವ ಊತಸಮೇತವಾದ ಗಂಟಲಿನ ಎಳೆತ. 3 ನಾನಾ ಖಾಯಿಲೆಗಳಲ್ಲಿ ತಲೆದೋರುವ ವಿವಿಧ ರೀತಿಯ ಶಬ್ದದಿಂದ ಒಡಗೂಡಿದ ಶ್ವಾಸಕ್ರಿಯೆ.

	ಮೊದಲನೆಯ ವಿಧದ ಕೂಗುಸಿರು ಊತರಹಿತವಾದದ್ದು. ಅದರಲ್ಲಿ ಯಾವ ಜಟಿಲತೆಯೂ ಇರುವುದಿಲ್ಲ. ಇದು ಸಾಮಾನ್ಯವಾಗಿ ಮಿದು ಮೂಳೆ ರೋಗದಿಂದ ನರಳುವ ಮಕ್ಕಳಲ್ಲಿ ತಲೆದೋರುವುದು. ಇಂಥ ಮಕ್ಕಳಲ್ಲೆಲ್ಲ ನಾಸಾ ಗ್ರಂಥಿಗಳು (ಅಡಿನಾಯಿಡ್ಸ್) ಊದಿಕೊಂಡಿರುವುದು ಸಾಮಾನ್ಯ. ಆನುವಂಶಿಕ ದೌರ್ಬಲ್ಯ, ಮಲಬದ್ಧತೆ, ಭೇದಿ, ಕರುಳಿನಲ್ಲಿ ಹುಳುಗಳು ಮುಂತಾದವು ಸಹ ಕೂಗುಸಿರಿಗೆ ಕಾರಣಗಳು. ಮಗುವನ್ನು ಬೆಚ್ಚಗಿಟ್ಟು ಸರಿಯಾದ ಔಷಧಿಯಿಂದ ಉಪಚರಿಸಬೇಕು. 

	ಎರಡನೆಯ ವಿಧದ ಕೂಗುಸಿರು ಸಾಮಾನ್ಯವಾಗಿ 1-8 ವರ್ಷ ವಯಸ್ಸಿನ ಮಕ್ಕಳಲ್ಲಿ ವ್ಯಕ್ತವಾಗುತ್ತದೆ. ರಾತ್ರಿ ಕಾಲ ಶೀತ ಹೆಚ್ಚಾದಾಗ ಇದು ಉಲ್ಬಣಿಸಬಹುದು. ಮೇಲಿಂದ ಮೇಲೆ ಕೆಮ್ಮು ನೆಗಡಿ ಈ ಮಕ್ಕಳಲ್ಲಿ ತಲೆದೋರುತ್ತಿರುತ್ತವೆ. ಆಗ ಮಗುವಿನ ಮುಖಭಾವ ಕತ್ತನ್ನು ಹಿಸುಕಿದಂತೆ ಇರುತ್ತದೆ. ಚಳಿಯಿಂದ ರಕ್ಷಣೆ, ಶಾಖ ಕೊಡುವುದು, ಯುಕ್ತ ಔಷಧಿಯಿಂದ ಉಪಚರಿಸುವುದು ಇಲ್ಲಿ ಅನುಸರಿಸಬೇಕಾದ ಉಪಶಮನ ವಿಧಿ.

	ಮೂರನೆಯ ವಿಧದ ಕೂಗುಸಿರಿನಲ್ಲಿ ಸಾಮಾನ್ಯವಾಗಿ ಶ್ವಾಸನಾಳದಲ್ಲಿ ಗಾಳಿಯಾಡಲು ಅಡಚಣೆ ಉಂಟಾಗುತ್ತದೆ. ಇದರ ಕಾರಣ ಏಕಾಣುಜೀವಿಗಳ ಸೋಂಕು. ಅವ್ಯಕ್ತ ವೈರಸ್ ಸೋಂಕಿನಿಂದಲೂ ಊತ ಉಂಟಾಗಬಹುದು. ಇದಲ್ಲದೇ ಉಬ್ಬಸ ರೋಗದಲ್ಲಿ ಆಹಾರ ಮತ್ತು ಗಾಳಿಗೆ ವ್ಯಕ್ತಿ ಅತಿಸೂಕ್ಷ್ಮ ಪ್ರತಿಕ್ರಿಯೆ ತೋರುವುದರಿಂದ ಉಂಟಾಗುವ ಶ್ವಾಸನಾಳಗಳ ಸೆಳತದಿಂದ ಸಹ ಕೂಗುಸಿರು ತಲೆದೋರುತ್ತದೆ. ಶ್ವಾಸನಾಳದಲ್ಲಿ ಯಾವುದಾದರೂ ವಸ್ತು ಸಿಕ್ಕಿಹಾಕಿಕೊಂಡಿದ್ದಾಗ, ಹೊರಗಡೆ ಯಾವ ಕಾರಣದಿಂದಲಾದರೂ ಉಂಟಾಗಿ ಉಸಿರಾಡಲು ಕಷ್ಟವಾದಾಗ ಅಡಚಣೆ ಒದಗಿದಂತೆ ಭಾವಿಸಬಹುದು. ನಾಯಿಕೆಮ್ಮಿನಲ್ಲಿ ಅತಿಜಿಗಟಾದ ಕಫ ಉತ್ಪತ್ತಿಯಾಗಿ ಹೊರಗೆ ಬರದೆ ಅತಿಯಾದ ಕೆಮ್ಮನ್ನೂ ಉಸಿರಾಟಕ್ಕೆ ಅಡಚಣೆಯನ್ನೂ ಉಂಟು ಮಾಡುತ್ತದೆ. ಡಿಫ್ತೀರಿಯಾ ಮತ್ತು ಸ್ಟ್ರೆಪ್ಟೋಕಾಕಸ್ ಏಕಾಣುಗಳು ಗಂಟಲಿನಲ್ಲಿ ಊತವನ್ನುಂಟು ಮಾಡಿದಾಗ ಅಲ್ಲಿ ಪೊರೆ ಕಂಡುಬಂದು ಅದು ಶ್ವಾಸನಾಳವನ್ನು ಹೆಚ್ಚು ಕಡಿಮೆ ಮುಚ್ಚಿಬಿಡುವುದರಿಂದ ಈ ರೋಗಗಳಲ್ಲಿಯೂ ಉಸಿರಾಟಕ್ಕೆ ಅಡಚಣೆಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಉಸಿರು ಬಿಡುವುದು ಕಷ್ಟವಾಗಿ ನಿಧಾನವಾಗಿ ಮತ್ತು ಸ್ವಲ್ಪಸ್ವಲ್ಪವಾಗಿ ಜರುಗುತ್ತ ಪುನಃ ಉಸಿರೆಳೆದುಕೊಂಡಾಗ ಯಾವುದಾದರೂ ವಿಶಿಷ್ಟರೀತಿಯ ಶಬ್ದವಾಗುತ್ತದೆ. ಶ್ಲೇಷ್ಮವೂ ಇರುವ ಸಂದರ್ಭಗಳಲ್ಲಿ ಶ್ವಾಸಕ್ರಮದಲ್ಲಿ ಉಂಟಾಗುವ ಶಬ್ದದ ಸ್ವಭಾವದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇವೆಲ್ಲವೂ ಕೂಗುಸಿರೇ, ಕೂಗುಸಿರಿಗೆ ಕಾರಣವೇನೆಂದು ನೋಡಿಕೊಂಡು ಚಿಕಿತ್ಸೆ ಮಾಡಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ಶಸ್ತ್ರಕ್ರಿಯೆಯಿಂದ ಶ್ವಾಸನಾಳವನ್ನು ಛೇದಿಸಿ ಸುಲಭವಾಗಿ ಉಸಿರಾಡುವುದಕ್ಕೆ ಸಾಧ್ಯವಾಗುವಂತೆ ಮಾಡಬೇಕಾಗಬಹುದು. ಡಿಫ್ತೀರಿಯಾ ರೋಗದಲ್ಲಿ ಅನೇಕ ವೇಳೆ ಈ ಸಂದರ್ಭ ಒದಗುತ್ತದೆ. ಉಬ್ಬಸಕ್ಕೆ ನಾಯಿಕೆಮ್ಮಿಗೆ ತಕ್ಕ ಔಷಧಿಗಳನ್ನು ಕೊಟ್ಟು ಉಸಿರಾಟ ಸುಲಭವಾಗುವಂತೆ ಮಾಡಿಕೊಳ್ಳಬೇಕು. ಹೊರಗಡೆಯಿಂದ ಅಥವಾ ಒಳಗಡೆಯೇ ಏನಾದರೂ ಅಡಚಣೆ ಇದ್ದಲ್ಲಿ ಅದನ್ನು ನಿವಾರಿಸಬೇಕು. ಕೂಗುಸಿರಿಗೆ ಕಾರಣವಾದ ಅನೇಕ ರೋಗರುಜಿನಗಳು ಶೈಶವದಲ್ಲಿಯೇ ಅಲ್ಲದೆ ಬಾಲ್ಯದಲ್ಲಿಯೂ ವಿರಳವಾಗಿ ತಾರುಣ್ಯದಲ್ಲೂ ಕಂಡುಬರುತ್ತವೆ.
(ಎಸ್.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ